ಅಡಗಟ್ಟು
	
ಮೋಟಾರು ಬಂಡಿಯ ಬಲೋತ್ಪಾದಕ ಎಂಜಿನ್ನು ಮತ್ತು ವಾಹನ ಚಾಲನೆಗೆ ಅಗತ್ಯವಾದ ಯಾಂತ್ರಿಕ ಸಜ್ಜನ್ನು ಒಳಗೊಂಡಿರುವ ಭಾಗ (ಛಾಸಿಸ್, ನ್ಯಾಧಾರ), ನಾಲ್ಕೂ ಚಕ್ರಗಳಿಂದ ಸ್ಟ್ರಿಂಗುಗಳ ಮೂಲಕ ಸೂಕ್ತ ರೀತಿಯಲ್ಲಿ ನೇತುಹಾಕಿರುವ ಲೋಹದ ಒಂದು ಚೌಕಟ್ಟು ಸಾಧಾರಣವಾಗಿ ಇದರ ಆಧಾರ. ಈಗಿನ ಸಮೂಹ ಉತ್ಪಾದನೆಗೆ ಹೊಂದಿಕೊಂಡಂತೆ ಇದ್ದು ಒಡಲಿನ (ಬಾಡಿ) ಪ್ರತ್ಯೇಕ ವಿಭಿನ್ನ ಶೈಲಿಗಳಿಗೂ ಹೊಂದಿಕೊಂಡು, ಅದಕ್ಕೇ ಕೂಡಿಕೊಳ್ಳುವಂತೆ ಅಡಗಟ್ಟು ರಚಿತವಾಗಿರುತ್ತದೆ. 
	
ಚೌಕಟ್ಟು: ಮೋಟಾರು ವಾಹನಗಳಿಗೆ ಚೌಕಟ್ಟೇ ಆಧಾರ. ಬಂಡಿಯ ಒಡಲು ಮತ್ತು ಇತರ ಸಜ್ಜುಗಳು ಅದಕ್ಕೆ ಬಂಧಿಸಲ್ಪಟ್ಟಿರುವುದರಿಂದಲೂ ಇಂಜಿನ್ನು ಮತ್ತು ಚಾಲಕ ಸಜ್ಜುಗಳನ್ನು ಅದು ಹೊತ್ತಿರುವುದರಿಂದಲೂ ಚಕ್ರಗಳು ಮತ್ತು ಅಚ್ಚಿನ ಮೂಲಕ ರಸ್ತೆಯ ಸ್ಥಿತಿಯಿಂದಾಗಿ ಅದಕ್ಕೆ ತಗಲುವ ಧಕ್ಕೆ ಮತ್ತು ಬಡಿತಗಳನ್ನು ತಡೆದು ಲೀನವಾಗಿಸಿಕೊಳ್ಳುವ ದೃಢತ್ವ (ರಿಜಿಡಿಟಿ) ಅದಕ್ಕಿರಬೇಕು. ಅದರ ರಚನೆಗೆ ಪರಿಗಣಿಸಬೇಕಾದ ಅಗತ್ಯ ಅಂಶಗಳೆಂದರೆ ಭದ್ರತೆ ಮತ್ತು ಅಂಗೀಕಾರಾರ್ಹವಾದ ಕನಿಷ್ಠ ಮಿತಿಯ ತೂಕ. ಎರಡೂ ಪಾಶ್ರ್ವಗಳಲ್ಲಿ ಉಕ್ಕಿನ ಒಂದೊಂದು ದ್ವಾರಕೊಳವೆ (ಚಾನಲ್) ವಿಭಾಗಗಳು ಮತ್ತು ಅವುಗಳನ್ನು ಪರಸ್ಪರ ಬಂಧಿಸುವ ಅದೇ ವಿಭಾಗದ ಅಡ್ಡ ಅಥವಾ ಕತ್ರಿಗಟ್ಟಿನಿಂದ ಚೌಕಟ್ಟು ರಚಿತವಾಗಿರುತ್ತದೆ. ತೂಕವನ್ನು ಕಡಿಮೆ ಮಾಡುವ ದೃಷ್ಟಯಿಂದ ಈ ಪಕ್ಕದ ವಿಭಾಗಗಳು ಅಧಿಕಬಾಗುವ ಮಹತ್ವವಿರುವ (ಬೆಂಡಿಂಗ್‍ಮೊಮೆಂಟ್) ನಡುಭಾಗದಲ್ಲಿ ಆಳವಾಗಿದ್ದು, ತುದಿಗಳತ್ತ ಬಾಗುವ ಮಹತ್ವ ಕಡಿಮೆಯಾದಂತೆ ಇವೂ ಕ್ರಮೇಣ ಚೂಪಾಗುತ್ತವೆ. ವಾಹನ ಚಲಿಸುತ್ತಿರುವಾಗ ಮುಂದಿನ ಚಕ್ರಗಳಿಗೆ ಸಲೀಸಾಗಿ ತಿರುಗಿಕೊಳ್ಳಲು ಅವಕಾಶವಾಗುವಂತೆ ಚೌಕಟ್ಟಿನ ಮುಂಭಾಗದ ಅಗಲ ಕಡಿಮೆಯಾಗಿರುವುದಲ್ಲದೆ ವಾಹನದ ಗುರುತ್ವಕೇಂದ್ರ ಆದಷ್ಟು ಕೆಳಮಟ್ಟದಲ್ಲಿದ್ದು ಹಿಂಭಾಗದ ಸ್ಟ್ರಿಂಗ್ ಜೋಡಣೆಗೆ ಹೊಂದಿಕೊಳ್ಳುವಂತೆ ಚೌಕಟ್ಟಿನ ಹಿಂದಿನ ತುದಿಯನ್ನು ಎತ್ತರಿಸಲಾಗಿರುತ್ತದೆ. ವಾಹನದ ಒಡಲು ಈ ಚೌಕಟ್ಟಿಗೆ ನೇರವಾಗಿ ಬಂಧಿತವಾಗಿರುವುದರಿಂದ ಈ ಚೌಕಟ್ಟಿನಲ್ಲೇನಾದರೂ ಬಾಗು ಅಥವಾ ತಿರಿಚು (ಟ್ವಿಸ್ಟ್) ಉಂಟಾದರೆ ಅದು ಒಡಲಿಗೂ ಸಾಗಿ ವಾಹನ ಕೀಚುಗುಟ್ಟುವುದು ಮತ್ತು ರಟ-ರಟಗುಟ್ಟುವುದರಿಂದ ಅದನ್ನು ಚೌಕಟ್ಟಿನ ಕತ್ತರಿಗಟ್ಟು ತಡೆಯುತ್ತದೆ. ದ್ವಾರಕೊಳವೆಗಳ ಬದಲು ಪೆಟ್ಟಿಗೆಯಾಕಾರದ ಉಕ್ಕಿನ ದೂಲಗಳನ್ನು (ಗರ್ಡರ್) ಉಪಯೋಗಿಸುವುದರಿಂದ ದೃಢತ್ವವನ್ನು ಸಾಧಿಸಿದಂತಾಗಿ ಕತ್ತರಿಗಟ್ಟನ್ನು ಉಪಯೋಗಿಸದಿರಬಹುದು. ಹಾಗೆಯೇ ವಾಹನದ ಒಡಲನ್ನೇ ಸೂಕ್ತರೀತಿಯಲ್ಲಿ ಭದ್ರಪಡಿಸಿ, ಚೌಕಟ್ಟಿನ ಕಾರ್ಯವನ್ನೂ ಉಕ್ಕಿನ ದೂಲವೇ ವಹಿಸುವಂತೆ ಕೆಲವು ತಯಾರಕರು ಮಾಡಿರುತ್ತಾರೆ. ಪ್ರತ್ಯೇಕ ಚೌಕಟ್ಟಿನ ಬದಲು ಸಮಗ್ರ ಒಡಲು ಚೌಕಟ್ಟನ್ನು ಉಪಯೋಗಿಸುವುದರಿಂದ ವಾಹನದ ತೂಕವನ್ನು ಲಘುವಾಗಿರಿಸಿ ರಚನೆಯನ್ನು ಸರಳಗೊಳಿಸಿರುವುದೂ ಉಂಟು.
	
ಮುಂತುದಿಯ ಜೋಲಣೆ: ಇತ್ತೀಚಿನ ಮೋಟಾರು ವಾಹನಗಳ ಮುಂದಿನ ಚಕ್ರಗಳು ಚೌಕಟ್ಟಿನಿಂದ ಸ್ವತಂತ್ರವಾಗಿ ಜೋಲಣೆಯಾಗಿದ್ದು, ಹಿಂದೆ ಬಳಕೆಯಲ್ಲಿದ್ದ ಮುಂದಿನ ಚಕ್ರಗಳ ಸ್ಥಿರ ಅಚ್ಚಿನ ದೆಸೆಯಿಂದುಂಟಾಗುತ್ತಿದ್ದ ಮುಂಭಾಗದ ಅದಿರಾಟವನ್ನು ಎಷ್ಟೋ ಕಡಿಮೆ ಮಾಡಿವೆ. ಒಂದೊಂದು ಚಕ್ರದ ಚಲನೆಯೂ ಒಂದು ಮಿತಿಗೊಳಪಟ್ಟು ಮತ್ತೊಂದರಿಂದ ಅಬಾಧಿತವಾಗಿರುತ್ತದೆ. ಸಾಮಾನ್ಯವಾಗಿ ಚಕ್ರ ಎರಡು ಸಮಾನಾಂತರ ಕೊಂಡಿಗಳ ಅಥವಾ ಹತೋಟಿಯ ತೋಳುಗಳ ಹಿಡಿತದಲ್ಲಿದ್ದು, ಕೆಳತೋಳಿಗೂ ಚೌಕಟ್ಟಿಗೂ ನಡುವೆ ಸುರುಳಿ (ಸ್ಟ್ರಿಂಗ್) ಇರುತ್ತದೆ. ಚಲನೆಯಲ್ಲಿ ಒಂದು ಚಕ್ರ ಸ್ವಲ್ಪ ಮೇಲಕ್ಕೂ ಮತ್ತೊಂದು ಕೆಳಕ್ಕೂ ಹೋದಾಗ ಹೆಚ್ಚು ಕಡಿಮೆ ಲಂಬವಾದ ನಿಲುವುಂಟಾಗುವಂತೆಯೂ ಇದ್ದು ಬಾಗಿ ತಿರುಗುವಾಗ ಚಾಲಕ ಚಕ್ರ (ಸ್ಟಿಯರಿಂಗ್) ವಾಸ್ತವಿಕ ಹತೋಟಿಗೊಳಪಟ್ಟಿರುವಂತೆಯೂ ಎರಡೂ ಚಕ್ರಗಳ ನಡುವೆ ತಿರುಗಿಸುವ ಮತ್ತು ದೃಢಗೊಳಿಸುವ ಕೊಂಡಿಗಳಿರುತ್ತವೆ. 
	
ಹಿಂತುದಿಯ ಜೋಲಣೆ: ಹಿಂಭಾಗದ ಚಕ್ರಗಳಿಗೂ ಸ್ವತಂತ್ರ ಜೋಲಣೆಯ ಪ್ರಯತ್ನ ನಡೆದಿದ್ದರೂ ಇದು ಸಾಮಾನ್ಯವಾಗಿ ಬಳಕೆಯಲ್ಲಿರದೆ, ರೇಕು ಪದರದ (ಲಾಮಿನೇಟೆಡ್ ಲೀ¥sóï) ಸ್ಟ್ರಿಂಗು ಅಥವಾ ಸುರುಳಿ ಮತ್ತು ನಾಭಿ ಕೊಂಡಿ (ರೇಡಿಯಸ್ ರಾಡ್) ಇವುಗಳ ಮೂಲಕ ಜೋಲಣೆಯಾಗಿರುವ ಹಿಂಬದಿಯ ಅಚ್ಚಿನ ರಚನೆಯೇ ಹೆಚ್ಚು ಬಳಕೆಯಲ್ಲಿದೆ. ರಸ್ತೆಯ ಧಕ್ಕೆಯನ್ನು ಲೀನಗೊಳಿಸುವುದನ್ನು, ಬಿರಿ (ಬ್ರೇಕ್) ಹಾಕುವಾಗ ಮತ್ತು ಚಾಲನೆಯಲ್ಲಿನ ತಿರುಗು ಪ್ರತಿಕ್ರಿಯೆಯನ್ನು ತಡೆದುಕೊಳ್ಳುವುದನ್ನು ಗಮನದಲ್ಲಿರಿಸಿ ಜೋಲಣೆಯ ರಚನೆಗೆ ಲಕ್ಷ್ಯಕೊಡಬೇಕಾಗುತ್ತದೆ. 
	
ರೇಕುಪದರದ ಸುರುಳಿಯನ್ನು ಉಪಯೋಗಿಸಿರುವಲ್ಲಿ ಅದರ ಒಂದು ತುದಿಯನ್ನು ಚೌಕಟ್ಟಿಗೆ ತಿರುಗಣಿಯಾಗಿರುವಂತೆ ನೇರವಾಗಿ ಕಟ್ಟಿ ಮತ್ತೊಂದು ತುದಿಯನ್ನು ಒಂದು ತೂಗು ಕೊಂಡಿಯ ಮೂಲಕ ಬಂಧಿಸಿರುವುದರಿಂದ, ಸುರುಳಿ ಬಾಗುವುದರಿಂದ ಆಗುವ ಅದರ ಉದ್ದದಲ್ಲಿನ ವ್ಯತ್ಯಾಸಕ್ಕೆ ಅವಕಾಶ ಕೊಟ್ಟಂತಾಗುತ್ತದೆ. ಹಿಂಬದಿಯ ಅಚ್ಚಿನ ಆವರಣ (ಹೌಸಿಂಗ್) ಕೋಶವನ್ನು ಸುರುಳಿಯ ಎರಡೂ ತುದಿಗಳ ನಡು ಭಾಗದಲ್ಲಿ ಬಂಧಿಸಲಾಗಿರುತ್ತದೆ. 
	
ಧಕ್ಕಾ ಲೀನಕ ಹಾಗು ದೃಢಕಾರಕಗಳು: ಸುರಳಿಗಳ ಪ್ರವಣತೆ ಮತ್ತು ಆರಂಭದಲ್ಲಿನ ಅಧಿಕ ಸಂಕೋಚನ ಅಥವಾ ವಿಸ್ತರಣ ಇವುಗಳನ್ನು ತಡೆಯಲು ಧಕ್ಕಾ ಲೀನಕಗಳನ್ನು (ಷಾಕ್ ಅಬ್¸óÁರ್ಬರ್) ಉಪಯೋಗಿಸಲಾಗುತ್ತದೆ. ವಿವಿಧ ಬಗೆಯಲ್ಲಿದ್ದು ಸಾಮಾನ್ಯವಾಗಿ ದ್ರವ ಸಾಮಥ್ರ್ಯದ (ಹೈಡ್ರಾಲಿಕ್) ರೀತಿಯವಾಗಿದ್ದು ನಾಲ್ಕು ಚಕ್ರಗಳೂ ಅವುಗಳ ಅಚ್ಚು ಮತ್ತು ಚೌಕಟ್ಟಿನ ನಡುವೆ ಇವನ್ನು ಅಳವಡಿಸಿರಲಾಗುತ್ತದೆ. ರಸ್ತೆಯ ತಿರುವಿನಲ್ಲಿ ಬಂಡಿಯೂ ಉರುಳುವಂತಾಗುವ ಪ್ರವೃತ್ತಿ ದೃಢಕಾರಕ ಕೊಂಡಿಯ ತಿರಿಚುವಿಕೆಯಿಂದಾಗಿ ತಡೆಯಲ್ಪಡುವುದಾಗಿದ್ದು ಹಿಂದಿನ ಮತ್ತು ಮುಂದಿನ ಚಕ್ರಗಳೆರಡಕ್ಕೂ ಉಪಯೋಗದಲ್ಲಿರುತ್ತದೆ. 
	
ಬಿರಿಗಳು: ಮೋಟಾರು ವಾಹನಗಳು ಸಾಮಾನ್ಯವಾಗಿ ಎರಡು ರೀತಿಯ ಪ್ರತ್ಯೇಕ ಬಿರಿಗಳಿಂದ (ಬ್ರೇಕ್ಸ್) ಸಜ್ಜಾಗಿರುತ್ತವೆ. ವಾಹನ ಚಲಿಸುತ್ತಿರುವಾಗ ಉಪಯೋಗಿಸುವ ಕಾಲುಮೆಟ್ಟಿನಿಂದ ಪ್ರಚಲಿತವಾಗುವ ದ್ರವಚಾಲಿತ ಬಿರಿಯೊಂದು, ವಾಹನವನ್ನು ನಿಲ್ಲಿಸಿರುವಾಗ ಬಳಸುವ ಮೀಟು ಸರಳಿನಿಂದ ಪ್ರಚಲಿತವಾಗುವುದಿನ್ನೊಂದು, ಕಾಲುಮೆಟ್ಟಿನ ಒತ್ತಡಕ್ಕಿಂತ ಹೆಚ್ಚು ಬಲ ಅಗತ್ಯವಾಗುವ ಭಾರವಾದ ಟ್ರಕ್ಕು ಮತ್ತು ಬಸ್ಸುಗಳಲ್ಲಿ ವಾಯುಪ್ರೇರಿತ ಬಿರಿಗಳನ್ನು ಉಪಯೋಗಿಸಲಾಗುತ್ತದೆ. 
	
ಚಕ್ರಗಳು ಮತ್ತು ಟೈರುಗಳು: ಪ್ರಾರಂಭದಿಂದಲೂ ಹಲವು ರೀತಿಯ ಮಾರ್ಪಾಡುಗಳಿಗೊಳಗಾಗಿರುವ ಮೋಟಾರು ವಾಹನ ಚಕ್ರದ ಈಗಿನ ಮಾದರಿ ಸಮಗ್ರ ಅಂಚುಳ್ಳ ಒತ್ತಿಕ್ಕಿ ರೂಪಿಸಿದ ಉಕ್ಕಿನ ಪಾಳೆಯದಾಗಿದ್ದು ಸಮಗ್ರವಾಗಿ ಅದನ್ನು ಹೊರತೆಗೆದು ಟೈರನ್ನು ಬದಲಾಯಿಸುವುದು ಸಾಧ್ಯವಾಗಿದೆ. ಹಾಗೆಯೇ ಟೈರೂ ಸಹ. ಹಿಂದೆ ನೀಡುತ್ತಿದ್ದ ಅಧಿಕ ಒತ್ತಡದಿಂದ ಇಂದಿನ ಕೆಳ ಒತ್ತಡಕ್ಕಿಳಿದಿರುವುದಲ್ಲದೆ ಅದರ ಮೇಲೆ ಬೀಳುವ ಹೊರೆಯಿಂದಾಗಿ ಅದರ ಆಯುಷ್ಯ ಕ್ಷೀಣಿಸುವುದನ್ನು ತಡೆಗಟ್ಟುವ ವೈe್ಞÁನಿಕ ರೀತಿಯ ಮೆಟ್ಟುಗಳ ವಿನ್ಯಾಸ. ಗಾಳಿ ಇಳಿದು ಹೋಗದ ಟ್ಯೂಬುಗಳು-ಇತ್ಯಾದಿ ವಿಧಾನಗಳಿಂದ ಟೈರಿನ ತಯಾರಿಕೆಯಲ್ಲಿ ಪ್ರಗತಿಯನ್ನು ಸಾಧಿಸಲಾಗುತ್ತಿದೆ. 
	
ಚಾಲಕ (ಸ್ಟಿಯರಿಂಗ್) ಗೇರ್: ಮೋಟಾರು ವಾಹನದ ಚಾಲಕಚಕ್ರವನ್ನು ಒಂದು ಉದ್ದನೆಯ ಚಾಲಕಸ್ತಂಭದ ಮೂಲಕ ಅದರ ಸುತ್ತುಚಲನೆಯನ್ನು ನೇರ ಚಲನೆಯನ್ನಾಗಿ ಮಾರ್ಪಡಿಸುವ ವರ್ಮ್ ಮತ್ತು ವರ್ಮ್ ವೃತ್ತಖಂಡದ ವ್ಯೂಹಕ್ಕೆ ಸೇರಿಸಲಾಗಿರುತ್ತದೆ. ಈ ನೇರಚಲನೆ ಸೂಕ್ತ ಕೊಂಡಿವ್ಯೂಹದ ಮೂಲಕ ಮುಂದಿನ ಎರಡು ಚಕ್ರಗಳಿಗೂ ಒಯ್ಯಲ್ಪಟ್ಟು ಅವು ತಿರುಗುವಂತೆ ಮಾಡುತ್ತದೆ.
	           (ಕೆ.ವಿ.ಎಸ್.)	
 (ಪರಿಷ್ಕರಣೆ: ಎಂ. ಜಿ. ಶ್ರೀನಿವಾಸನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ